ಚಿನ್ಸುರ
ಕಲ್ಕತ್ತದ ಬಳಿ ಹೂಗ್ಲಿನದಿಯ ದಡದಲ್ಲಿ ಇರುವ ಒಂದು ಪಟ್ಟಣ. ಡಚ್ ಈಸ್ಟ್ ಇಂಡಿಯ ಕಂಪನಿಯ ಮುಖ್ಯ ವಸಾಹತುವಾಗಿತ್ತು. (1653). ಡಚ್ಚರು ಇಲ್ಲಿಂದ ಕಚ್ಚಾ ರೇಷ್ಮೆ, ಬಟ್ಟೆ, ಪೆಟ್ಲಪ್ಪುಗಳನ್ನು ರಫ್ತು ಮಾಡುತ್ತಿದ್ದರು. ಪ್ಲಾಸಿ ಕದನದ ಬಳಿಕ ಇಂಗ್ಲಿಷರು ಬಂಗಾಳದಲ್ಲಿ ಯಶಸ್ಸು ಗಳಿಸುತ್ತಿದದ್ದು ಚಿನ್ಸುರದಲ್ಲಿದ್ದ ಡಚ್ಚರ ಅಸೂಯೆಗೆ ಕಾರಣವಾಯಿತು. ಅವರು ಬಂಗಾಳದ ನವಾಬ ಮೀರ್ ಜಾಫರನೊಂದಿಗೆ ಇಂಗ್ಲಿಷರ ವಿರುದ್ಧ ಗುಪ್ತ ಒಪ್ಪಂದ ಮಾಡಿಕೊಂಡರು. ಡಚ್ಚರು ಜಾವದಿಂದ ಸೈನಿಕರನ್ನು ಕರೆಸಬೇಕೆಂದಿದ್ದರು. ಆದರೆ ರಾಬರ್ಟ್ ಕ್ಲೈವನ ಮುತ್ಸದ್ದಿತನದಿಂದ ಡಚ್ಚರ ಯೋಜನೆ ವಿಫಲವಾಯಿತು. ಡಚ್ಚರ ಸೈನ್ಯ ಬರುವುದಕ್ಕೆ ಮುಂಚೆಯೇ ಕ್ಲೈವ್ ಬಿದೆರಾಕದನದಲ್ಲಿ ಡಚ್ಚರನ್ನು ಸೋಲಿಸಿದ (ನವೆಂಬರ್, 1769). ಡಚ್ಚರು ಶಾಂತಿ ಒಪ್ಪಂದ ಮಾಡಿಕೊ|ಳ್ಳಬೇಕಾಯಿತು. ಅವರು ಎಡ ಚಿನ್ಸುರವನ್ನು ಮಾತ್ರ ವ್ಯಾಪಾರಕ್ಕಾಗಿ ಬಳಸಬೇಕೆಂದು ಕ್ಲೈವ್ ನಿರ್ಬಂಧ ಹಾಕಿದ. ಚಿನ್ಸುರ ಪಟ್ಟಣ ಡಚ್ಚರ ಕೈಯಲ್ಲಿದ್ದದ್ದು 1825ರ ವರೆಗೆ ಮಾತ್ರ. ಸುಮಾತ್ರದಲ್ಲಿಯ ಕೆಲವು ಪ್ರದೇಶಗಳ ವಿನಿಮಯ ನಡೆದಾಗ ಚಿನ್ಸುರವನ್ನೂ ಡಚ್ಚರು ಬ್ರಿಟಿಷರಿಗೆ ಬಿಟ್ಟು ಕೊಟ್ಟರು.

ಬಂಗಾಳದ ಪ್ರಥಮ ಮಿಷನರಿ ಶಾಲೆ ಸ್ಥಾಪಿತವಾದ್ದು ಇಲ್ಲೇ.				(ಬಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ